ನಿರೂಪಾರಾಯ್
(1911) ನಿರೂಪಾರಾಯ್ ಎಂದೊಡನೆ ಕಣ್ಮುಂದೆ ಹಾಯುವುದು ನೊಂದಮಾತೆ, ವಾತ್ಸಲ್ಯಮಯಿ, ಕ್ಷಮಾಶೀಲೆ, ಆದರ್ಶ ನಾರಿಯ ಪಾತ್ರ. ಆದರೆ ನಿರೂಪಾರಾಯ್ ತನ್ನ ಆರು ದಶಕಗಳ ತಾರಾ ಜೀವನದಲ್ಲಿ ನಾಯಕಿಯಿಂದ ಹಿಡಿದು ಎಲ್ಲಾ ಬಗೆಯ ವೈವಿಧ್ಯಮಯ ಪಾತ್ರಗಳಲ್ಲಿ  ಅಭಿನಯಿಸಿದ್ದಾರೆ.

ಗುಜರಾತಿನ ವಲ್ಸರ್‍ನಲ್ಲಿ ಜನ್ಮ. ಹುಟ್ಟುಹೆಸರು ಕೋಕಿಲಾ ಕಿಶೋರಚಂದ್ರ ವಲ್ಸಾರ. ಆರಂಭದಲ್ಲಿ ಅಭಿನಯಿಸಿದ್ದು ಗುಜರಾತಿ ಚಿತ್ರಗಳಲ್ಲಿ  ಮೊದಲ ಚಿತ್ರ ರಂಕಾದೇವಿ (1945), ಗುಣಸುಂದರಿ (1948) ಚಿತ್ರದಲ್ಲಿನ  ಅಭಿನಯ ಮುಂಬೈ ನಿರ್ದೇಶಕರ ಗಮನ ಸೆಳೆಯಿತು. ಹಿಂದಿ ಚಿತ್ರಗಳಲ್ಲಿ  ಆರಂಭದಲ್ಲಿ ಕಾಣಿಸಿಕೊಂಡದ್ದು ಪೌರಾಣಿಕ ಪಾತ್ರಗಳಲ್ಲಿ. ಸೀತೆ, ಪಾರ್ವತಿ ಮೊದಲಾದ ದೇವಿಯರ ಪಾತ್ರಗಳು. ರಣಜಿತ್ ಮೂವಿಟೋನ್ ನಿರ್ಮಿಸಿದ ಹರಹರ ಮಹದೇವ್ ಅತ್ಯಂತ ಯಶಸ್ವಿಚಿತ್ರ. ಈ ಚಿತ್ರದಲ್ಲಿ  ಪಾರ್ವತಿ ಪಾತ್ರ ಎಲ್ಲರ ಗಮನ ಸೆಳೆಯಿತು. ರಣಜಿತ್ ಮೂವಿಟೋನ್ ನಂಟು ಗಾಢವಾಯಿತು. ಆ ಸಂಸ್ಥೆಯ ಪೌರಾಣಿಕ ಚಿತ್ರಗಳಿಗೆಲ್ಲಾ  ನಿರೂಪಾರಾಯ್ ನಾಯಕಿ. ಬಿಮಲ್ ರಾಯ್ ಅವರ ಶೋಭಿತಾ,  ಜರ್ಮನ್ (1953) ನಲ್ಲಿನ  ಕೃಷಿಕನ ಮಡದಿಯ ಪಾತ್ರ ಅವರ ಖ್ಯಾತಿಯನ್ನು ವಿಸ್ತರಿಸಿತು.
ನಿರೂಪಾರಾಯ್ ತಾರಾ ಜೀವನದ ಮುಂದಿನ ಚಿತ್ರ ಮಾತೆ. ತಾಯಿಯ ಪಾತ್ರ ವಹಿಸಿದ ಮೊದಲ ಚಿತ್ರ. ಮುನೀಮ್‍ಜಿ (1955), ದೇವಾನಂದನ ತಾಯಿಯ ಪಾತ್ರ. ಅದಕ್ಕೆ ಫಿಲಮ್‍ಫೇರ್ ಪ್ರಶಸ್ತಿಯ ಪುರಸ್ಕಾರ. ಛಾಯ (1961), ಶಹನಾಯ್ (1964) ಚಿತ್ರಗಳಲ್ಲಿನ ಪೋಷಕ ಪಾತ್ರಕ್ಕೂ ಫಿಲಮ್ ಫೇರ್ ಪ್ರಶಸ್ತಿಯ ಗರಿ.  ಮುಂದಿನ ದಶಕಗಳಲ್ಲಿ  ಆಕೆ ಹಿಂದಿ ಚಿತ್ರರಂಗದ ನಾಯಕರೆಲ್ಲರ ಮಾತೆಯಾಗಿ ಅಭಿನಯಿಸಿದರು. ಬಲರಾಜ್ ನಹಾನಿ ಜೊತೆಯಲ್ಲಿ  ಅಭಿನಯಿಸಿದ ರೋಟಿ ಔರ್ ಜಮಾನ್ ಮತ್ತು ಹೀರಾ ಮೋತಿ, ಅಶೋಕ್ ಜೊತೆ ಪಾತ್ರ ವಹಿಸಿದ ಭಾಯಿ ಭಾಯಿ, ಮತ್ತು ಕಾರಿಗಾರ್,  ಅಮಿತಾಬ್ ಬಚ್ಚನ್ ಜೊತೆ ಅಭಿನಯಿಸಿದ ಅಮರ್ ಅಕ್ಬರ್ ಆಂಥೋನಿ, ಮತ್ತು ಮುಕದ್ದರ್ ಕ ಸಿಕಂದರ್  ನಿರೂಪಾರಾಯ್ ಅಭಿನಯಿಸಿದ ಅತ್ಯುತ್ತಮ ಯಶಸ್ವಿಚಿತ್ರಗಳು.									
	(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ